ಮಂಗರಸ 4 =
	ಸುಮಾರು 1755. ಕನ್ನಡದಲ್ಲಿ ಮನ್ಮಥಮಣಿದರ್ಪಣ ಎಂಬ ಗ್ರಂಥವನ್ನು ಬರೆದಿರುವ ಕವಿ. ಇವನ ಬಗ್ಗೆ ಹೆಚ್ಚು ವಿವರಗಳನ್ನು ಮೊದಲಬಾರಿಗೆ ನೀಡಿದವರು ಡಿ.ಎಲ್.ಎನ್. ಈತನಿಗೆ ಅಭಿನವ ಮಂಗರಸ ಎಂಬ ಬಿರುದೂ ಇದೆ. ನಿಜವಾದ ಹೆಸರು ರಾಯಣ್ಣ. ಈತ ತನ್ನ ಕಾವ್ಯದಲ್ಲಿ ಶ್ರೀರಂಗಪಟ್ಟಣದ ದೊರೆ ಕೃಷ್ಣರಾಜನನ್ನು ಹೆಸರಿಸಿದ್ದಾನೆ. ಈ ಕೃಷ್ಣರಾಜ 1735-67ರ ನಡುವೆ ಇದ್ದ ಇಮ್ಮಡಿ ಕೃಷ್ಣರಾಜ ಇರಬೇಕು. ಆದ್ದರಿಂದ ರಾಯಣ್ಣನ ಕಾಲ ಸು. 1755 ಎಂದು ಊಹಿಸಲಾಗಿದೆ. ಈತನ ಸ್ಥಳ ವೇಣುಪುರಿ. ಇದು ಬಿದರೂರು ಆಗಿರಬಹುದೆಂದು ಡಿ.ಎಲ್.ಎನ್. ಅವರ ಅಭಿಪ್ರಾಯ. ಅಭಿನವವಾಣಿ ಎಂಬ ಬಿರುದುಳ್ಳ ಕವಿ ಬೊಮ್ಮಣ್ಣ ಈತನ ತಂದೆ. ಬೊಮ್ಮಣ್ಣ ಫಣಿಸುತ ಚರಿತೆ ಎಂಬ ಕಾವ್ಯವನ್ನು ಷಟ್ಪದಿಯಲ್ಲಿ ಬರೆದಿದ್ದಾನೆ. ಗುರು ಅಭಿನವ ಲಕ್ಷ್ಮೀಸೇನ. ರಾಯಣ್ಣ ತನ್ನ ಕಾವ್ಯದಲ್ಲಿ ಪೂರ್ವಕವಿಗಳ ಪೈಕಿ ರತ್ನತ್ರಯರನ್ನು ಸ್ಮರಿಸಿದ್ದಾನೆ. ಮಿಕ್ಕ ಪೂರ್ವಕವಿಗಳಾರನ್ನೂ ಹೆಸರಿಸದೆ ಈತನಿಗಿಂತ ಹಿಂದೆ ನೇಮಿಜಿನೇಶಸಂಗತಿ ಎಂಬ ಹರಿವಂಶವನ್ನು ಸಾಂಗತ್ಯದಲ್ಲಿ ಬರೆದ ಮೂರನೆಯ ಮಂಗರಸನನ್ನು ಮಾತ್ರ ಸ್ತುತಿಸಿದ್ದಾನೆ.

	ಮನ್ಮಥಮಣಿದರ್ಪಣ ಕಾವ್ಯ ಭಾಮಿನೀ ಷಟ್ಪದಿಯಲ್ಲಿದೆ. 60 ಸಂಧಿ, 3121 ಪದ್ಯಗಳಿವೆ. ಕೃತಿ ಅಸಮಗ್ರ. ಮಂಗರಸ ಹರಿವಂಶವೆಂಬ ಚರಿತೆಯಲ್ಲಿ ಹೇಳಿದ ಕಥೆಯನ್ನು ಷಟ್ಟದಿಯಲ್ಲಿ ಹೇಳು ಎಂದು ಶ್ರಾವಕರು ಪ್ರಾರ್ಥಿಸಲು ರಾಯಣ್ಣ ಬಲ್ಲನಿತೊರೆದನು. ತನ್ನ ಗ್ರಂಥಾರಂಭದಲ್ಲಿ ಮತ್ತು ಪ್ರತಿಸಂಧಿಯ ಕೊನೆಯ ಗದ್ಯದಲ್ಲಿ ವೇಣುಪುರಿಯ ಪಾಶ್ರ್ವಜಿನನನ್ನು ಸ್ಮರಿಸಿದ್ದಾನೆ. ತಾನು ಯತಿಪ್ರಾಸ ಗಣಭೇದವನು ಅರಿಯನೆಂದು, ಸುಜನರು ಮಂದದಿ ತಿದ್ದುವುದೆಂದು ಹೇಳಿ ವಿನಯ ತೋರಿದ್ದಾನೆ.							
(ಎಸ್.ಎಚ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ